ಮಾಧ್ಯಮವು ಅತ್ಯಂತ ಪ್ರಭಾವಿತ ಅಂಗವಾಗಿದ್ದು “ಖಡ್ಗಕ್ಕಿಂತ ಪೆನ್ನಿನ ಬರವಣಿಗೆ ಹರಿತವಾಗಿರುತ್ತದೆ” ಎಂದು ಹಲವು ವಿಚಾರವಂತರ ನಂಬಿಕೆಯಾಗಿದೆ. ವಿಶ್ವದ ಎಲ್ಲಾ ಭಾಗದಲ್ಲೂ ಮಾಧ್ಯಮವು ತನ್ನದೇ ಆದ ಛಾಪು ಬೀರಿದೆ. ಪ್ರಜಾಪ್ರಭುತ್ವ, ಕಮ್ಯುನಿಸ್ಟ್, ರಾಜ್ಯ ಚಕ್ರಾಧಿಪತ್ಯ, ಸರ್ವಾಡಳಿತ ಹೀಗೆ ಮುಂತಾದ ವ್ಯವಸ್ಥೆಯಲ್ಲಿ ಮಾಧ್ಯಮವು ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಒಂದು ದೇಶದಲ್ಲಿ ಒಂದು ಸರ್ಕಾರ ಬರಬೇಕಾದರೆ ಅಥವಾ ಒಂದು ಸರ್ಕಾರ ಉರುಳಬೇಕಾದರೆ ಮಾಧ್ಯಮದ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಭಾರತ, ರಷ್ಯಾ, ಅಮೇರಿಕಾ ಮತ್ತು ಬ್ರಿಟನ್ ಸೇರಿದಂತೆ ರಾಜಕೀಯ ಇತಿಹಾಸದಲ್ಲಿ ಮಾಧ್ಯಮವು ತಲ್ಲಣ ಸೃಷ್ಠಿ ಮಾಡಿದೆ. ಚೀನಾ, ಪಾಕಿಸ್ತಾನ, ಅರಬ್ ದೇಶಗಳಲ್ಲಿ ಮಾಧ್ಯಮದ ಮೇಲೆ ನಿರಂತರವಾದ ಹಲ್ಲೆ ಮತ್ತು ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವಾಗಲು ಮಾಧ್ಯಮಗಳು ಆಯಾ ದೇಶದ ವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿವೆ. ಭಾರತ ದೇಶದ ವಿಚಾರವಾಗಿ ಹೇಳುವುದಾದರೆ ಹಲವಾರು ರಾಜಕಾರಣಿಗಳು ಜೈಲಿಗೆ ಹೋಗಲು ಮತ್ತು ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರ ಜಗತ್ಜಾಹೀರಾತಾಗಲು ಮಾಧ್ಯಮಗಳು ಕಾರಣವಾಗಿದೆ. ಹಲವಾರು ರಾಜಕಾರಣಿಗಳ ಹಗರಣಗಳನ್ನು ಬಯಲಿಗೆಳೆಯುವುದರ ಜೊತೆಗೆ ತನಿಖಾ ವರದಿಗಳ ಮೂಲಕ ಹಲವರ ಬಣ್ಣವನ್ನು ಕಳಚಿವೆ. ತೆಹಲ್ಕ ಅಂತಹ ತನಿಖಾ ತಂಡಗಳಿ0ದ ರಾಜಕೀಯ ವಲಯದಲ್ಲಿ ಭಯವನ್ನು ಸೃಷ್ಟಿಸಿದೆ.
ಓರ್ವ ಸಾಮಾನ್ಯ ಮನುಷ್ಯನನ್ನು ಹೀರೋ ಮಾಡಬಹುದು. ಓರ್ವ ಹೀರೋನನ್ನು ಜೀರೋ ಕೂಡ ಮಾಡಬಹುದು ಸಮೀಕ್ಷೆಗಳ ಜನಾಭಿಪ್ರಾಯ, ಸತ್ಯ ಸಂಶೋಧನೆ, ಕುಟುಕು ಕಾರ್ಯಾಚರಣೆ ಮತ್ತು ಸಂದರ್ಶನ, ಲೇಖನಗಳು ಸುದ್ದಿಗಳ ಮೂಲಕ ಜನರಿಗೆ ಮಾಹಿತಿ ಮತ್ತು ಸತ್ಯದ ದರ್ಶನ ಮಾಡಿಸುವ ಮೂಲಕ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಮತ್ತು ಮಾಧ್ಯಮವನ್ನು “ಕಾವಲು ನಾಯಿ” ಎನ್ನಬಹುದು. ಸರಕಾರ ಅಥವಾ ವ್ಯವಸ್ಥೆಯ ಸರಿ –ತಪ್ಪುಗಳನ್ನು ಅತ್ಯಂತ ಸೂಕ್ಷ್ಮಾತಿ ಯಾಗಿ ಅವಲೋಕನ ಮಾಡಿ ಸಾರ್ವಜನಿಕರಿಗೆ ತೋರಿಸುವ ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಸುದ್ದಿಯನ್ನು ಸುದ್ದಿಯಾಗಿ, ವಿಚಾರವನ್ನು ವಿಚಾರವಾಗಿ ತೋರಿಸುವ ಕೆಲಸವನ್ನು ಮಾತ್ರ ಮಾಡಬೇಕು. ಅವಲೋಕನವನ್ನು ಜನರ ವಿವೇಚನೆಗೆ ಬಿಟ್ಟಿರಬೇಕು. ಮಾಧ್ಯಮಗಳು ತಮ್ಮದೇ ನೈತಿಕತೆ ಮತ್ತು ಧರ್ಮವನ್ನು ಪಾಲನೆ ಮಾಡುತ್ತಾ ನಡೆದುಕೊಂಡರೆ ಆಧುನಿಕ ಪ್ರಜಾಪ್ರಭುತ್ವವು ಇನ್ನಷ್ಟು ಬಲಗೊಂಡು ಸಮಾನತೆಯ ಸಮಾಜ ನಿರ್ಮಾಣವಾಗುತ್ತದೆ. ಮಾಧ್ಯಮದ ಶಕ್ತಿಯು ಯಾರ ವಿರುದ್ಧವಾಗಿಯೂ ಇರಬಾರದು. ಬಡವರ, ಅನ್ಯಾಯಕ್ಕೊಳಗಾದವರ ಮುಗ್ಧ ಮತ್ತು ಯೋಗ್ಯರ ಪರವಾಗಿ ಮಾಧ್ಯಮಗಳು ಧ್ವನಿ ಎತ್ತಬೇಕು. ಮಾಧ್ಯಮದ ಶಕ್ತಿ ಎನ್ನುವುದು. ವಜ್ರವಿದ್ದಂತೆ, ಏಕೆಂದರೆ ವಜ್ರವನ್ನು ವಜ್ರದಿಂದ ಮಾತ್ರ ಕತ್ತರಿಸಲು ಸಾಧ್ಯ. ವಿಜ್ಞಾನದ ರೂಪದಲ್ಲಿ ಹೇಳುವುದಾದರೆ ಇಂಗಾಲವು ಕಲ್ಲಿದ್ದಲಾಗಿ, ಕೆಂಡವಾಗಿ ಹಾಗೆಯೇ ವಜ್ರವು ಕೂಡ ಇಂಗಾಲದ ಅಣುಗಳಿಂದ ರೂಪಿತಗೊಂಡ ವಸ್ತು ವಜ್ರದ ಶ್ರೇಷ್ಠತೆ ಕಲ್ಲಿದ್ದಲಿಗಿಲ್ಲ ಇಲ್ಲಿ ಹೇಳಬೇಕಾದ ತಾತ್ಪರ್ಯ ಇಂಗಾಲದಿ0ದಲೇ ವಜ್ರ ಮತ್ತು ಕಲ್ಲಿದ್ದಲು ನಿರ್ಮಾಣಗೊಂಡರು ಆಯಾ ವಸ್ತುಗಳ ಯೋಗ್ಯತೆ ಬದಲಾಗುತ್ತದೆ. ಮಾಧ್ಯಮವು ಯೋಗ ಮತ್ತು ಯೋಗ್ಯತೆ ಪಡೆಯಲು ಶ್ರಮಿವಹಿಸಬೇಕು, ವಜ್ರದಂತೆ ಹೊಳೆಯಬೇಕು. ತನ್ನ ಶಕ್ತಿಯನ್ನು ಉತ್ತಮ ವಿಚಾರಗಳಿಗೆ ಬಳಸಬೇಕೇ ಹೊರತು ಕೆಟ್ಟ ಕಾರ್ಯಗಳಿಗಲ್ಲ. ಉತ್ತಮ ಮಾಧ್ಯಮದಿಂದ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ.

 

 

 

 

ರಮೇಶ್ ಎಸ್.ಜಿ.

ಅಧ್ಯಕ್ಷರು

ಕರ್ನಾಟಕ ಪ್ರೆಸ್ ಕ್ಲಬ್

ಸಂಪಾದಕರು

ಕನಸಿನ ಭಾರತ