ಮಾಧ್ಯಮದ ಇತಿಹಾಸವು ಅತ್ಯಂತ ರೋಚಕವಾಗಿದ್ದು ಇಂತಹ ಇತಿಹಾಸವುಳ್ಳ ಮಾಧ್ಯಮದ ಹುಟ್ಟಿನಲ್ಲಿ ಧರ್ಮ ಪ್ರಚಾರ, ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯೆತ್ತುವವರು ಮಾಧ್ಯಮವನ್ನು ಆಯಾ ಪ್ರಾಂತೀಯ ಸಂಸ್ಕೃತಿಯ ರಾಯಭಾರಿ ಎನ್ನಬಹುದು. ಇಂತಹ ಮಾಧ್ಯಮಗಳ ಬಗ್ಗೆ ತನ್ನದೇ ಆದ ಧರ್ಮವಿದೆ ಅದು ಪತ್ರಿಕಾ ಧರ್ಮ. ಇಲ್ಲಿ ಧರ್ಮ ಎಂದರೆ ಒಗ್ಗಟ್ಟು, ನೈತಿಕತೆ, ಸಿದ್ದಾಂತದ ಪಾಲನೆ ಒಂದು ಸಿದ್ದಾಂತಕ್ಕಾಗಿ ಹೋರಾಟ ಒಳಗೊಂಡಿದೆ ಹೊರತು ಸ್ಪರ್ಧೆ, ಮೋಸ, ಬೆಳವಣಿಗೆಗಾಗಿ ಮತ್ತೊಬ್ಬರಿಗೆ ಹಾನಿ ಮಾಡುವುದು ಸೇರುವುದಿಲ್ಲ. ಮಾಧ್ಯಮವು ಮಾತಿನ ಮೂಲಕ, ಬರಹದ ಮೂಲಕ, ಚಿತ್ರದ ಮೂಲಕ, ಸನ್ನೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವುದರಿಂದ ಅತ್ಯಂತ ಜಾಗೃತಿವಹಿಸಬೇಕಾಗುತ್ತದೆ. ಚಲನಚಿತ್ರ, ನಾಟಕ, ಜಾನಪದ, ಬರಹ, ನಾಟ್ಯ, ತಾಳೆಗರಿಯ ಬರಹ ಮುಂದುವರಿಯುತ್ತ ಪತ್ರಿಕಾ ಲೋಕ ನಂತರದ ಸಾಲಿನಲ್ಲಿ ಟಿವಿ ಮತ್ತು ಆನ್‌ಲೈನ್‌ಗಳ ಭರಾಟೆಯಲ್ಲಿ ಪತ್ರಿಕಾ ಧರ್ಮಕ್ಕೆ ಕುತ್ತು ಬರುತ್ತಿದೆ. ಇಂದು ಸಾಮಾಜಿಕ ಜಾಲತಾಣಗಳೇ ದೊಡ್ಡ ಮಾಧ್ಯಮದಂತೆ ಅನಿಸುತ್ತಿದ್ದು ಈ ಮಾಧ್ಯಮಗಳ ಸಮೂಹದಲ್ಲಿ ಸುದ್ದಿ ಚಾನಲ್ ಗಳೂ ಕೂಡ ಮಾಧ್ಯಮ ಧರ್ಮವನ್ನು ಗಾಳಿಗೆ ತೂರುತ್ತಿದೆ.
ಪ್ರತಿಯಂದು ಪತ್ರಿಕೆ ಮತ್ತು ಟಿವಿ ವಾಹಿನಿಗಳು ತನ್ನದೇ ಆದ ವಿಚಾರ, ಗುರಿ, ನೈತಿಕತೆ ಮತ್ತು ಭವಿಷ್ಯವನ್ನು ಇಟ್ಟುಕೊಂಡು ಪ್ರಾರಂಭವಾಗಿರುತ್ತದೆ. ಆದ್ದರಿಂದ ಉಳಿವಿನ ಪ್ರಶ್ನೆಗಾಗಿ, ಭವಿಷ್ಯಕ್ಕಾಗಿ ಆಧುನಿಕ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಲು ಸೋಲುತ್ತಿರುವ ಹಿನ್ನಲೆಯಲ್ಲಿ ತಮ್ಮ ನೈತಿಕತೆಯನ್ನು ಗಾಳಿಗೆ ತೂರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಮಾಧ್ಯಮ ಧರ್ಮವನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ಮಾಧ್ಯಮ ಧರ್ಮ ಎಂದರೆ ಏನು? ಮಾಧ್ಯಮವು ಆಯಾ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಸಂಪಾದಕರು ಆಥವಾ ಆ ಮಾಧ್ಯಮದ ಸೃಷ್ಠಿಕರ್ತರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ಕೂಡ ಮಾಧ್ಯಮದ ನೈತಿಕತೆ ಮತ್ತು ಧರ್ಮವನ್ನು ಸಾಮಾನ್ಯವಾಗಿ ಹೇಳಬೇಕೆಂದರೆ ಈ ಕೆಳಗಿನ ವಿಚಾರಗಳನ್ನು ಒಳಗೊಂಡಿರಬೇಕು.
- ರಾಷ್ಟç ಪ್ರೇಮವನ್ನು ಹುಟ್ಟಿಸುವಂತಹ ವಿಚಾರಗಳಿಗೆ ಒತ್ತು ನೀಡಬೇಕು.
- ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಬೇಕು.
- ಯಾವುದೇ ಕಾರಣಕ್ಕೂ ಧರ್ಮ ಮತ್ತು ಜಾತಿಯ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಧ್ಯಮ ಮಾಡಬಾರದು.
- ದೇಶದ ಪ್ರತಿಬಿಂಬಗಳಾದ ರಾಷ್ಟçಧ್ವಜ, ರಾಷ್ಟçಲಾಂಛನ, ಸಂವಿಧಾನಕ್ಕೆ ಮತ್ತು ನ್ಯಾಯಾಲಯಗಳಿಗೆ ಗೌರವ ಕೊಡಬೇಕು.
- ಅಶ್ಲೀಲ ಪದಬಳಕೆ, ವ್ಯಕ್ತಿಗೆ ಮಾನಹಾನಿ ಆಗುವಂತಹ ಪದಬಳಕೆ ಮಾಡಬಾರದು.
- ಸುದ್ದಿಯನ್ನು ಸುದ್ದಿಯಾಗಿ ಮಾಡಬೇಕೆ ಹೊರತು ತಮ್ಮ ವೈಯಕ್ತಿಕ ಧ್ವೇಷ, ಅಸೂಯೆ ತುಂಬಬಾರದು.
- ಓರ್ವ ಪತ್ರಕರ್ತ ಅಥವಾ ಮಾಧ್ಯಮವು ಬಿಳಿ ಹಾಳೆಯಷ್ಟೇ ಶುದ್ದವಾಗಿರಬೇಕು. ಯಾವುದೇ ರೀತಿಯ ಭ್ರಮೆ, ಒತ್ತಡ, ಅಭಿಮಾನ, ವೈಯಕ್ತಿಕ ಧ್ವೇಷ, ಸೇಡಿನ ಮನೋಭಾವ, ಸ್ವಹಿತಾಸಕ್ತಿ, ಲಾಭ ಒಳಗೊಂಡಿರಬಾರದು.
- ಯಾವುದೇ ಮಾಧ್ಯಮವು ತನ್ನದೇ ಆದ ವಿಚಾರ ಮತ್ತು ಗುರಿಯನ್ನು ಇಟ್ಟುಕೊಂಡು ನೈತಿಕತೆ ಪಾಲಿಸುತ್ತ ಬೆಳೆಯಬೇಕು.
- ತನಿಖಾ ವರದಿಗಳನ್ನು ಮಾಡುವಾಗ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡಿ ಸರಿಯಾದ ತನಿಖಾ ವರದಿಗಳನ್ನು ಸಿದ್ದಪಡಿಸಬೇಕು ಅಂದರೆ ಯಾವುದೇ ಕಾರಣಕ್ಕೂ ನಿರಪರಾಧಿಗೆ ಶಿಕ್ಷೆ ಆಗಬಾರದು.
- ನಕಲಿ ಪತ್ರಿಕೋಧ್ಯಮ ಕಾನೂನು ಬಾಹಿರ ಪತ್ರಿಕೋಧ್ಯಮ ಮಾಡಬಾರದು.
- ಮಾಧ್ಯಮಗಳು ಭಯ ಹುಟ್ಟಿಸುವ ವ್ಯವಸ್ಥೆಗಳಾಗಬಾರದು ಮಾಹಿತಿ ನೀಡುವ ಆಗರಗಳಾಗಬೇಕು.
- ಯಾವುದೇ ವಿಚಾರಗಳನ್ನು ಬಲವಂತವಾಗಿ ಜನರ ಮನಸ್ಸಿನಲ್ಲಿ ತುಂಬಬಾರದು.
- ಯಾರ ಪರ ಅಥವಾ ಯಾರ ವಿರುದ್ದವೂ ಇರಬಾರದು.
- ಮಾಧ್ಯಮವು ರಾಜಕಾರಣಿಗಳಿಂದ, ರಾಜಕೀಯ ಪಕ್ಷಗಳಿಂದ ಮತ್ತು ರಾಜಕೀಯ ವ್ಯವಸ್ಥೆಯಿಂದ ಆದಷ್ಟು ದೂರನಿಂತು ಸುದ್ದಿ ಮಾಡಬೇಕು.
- ಮಾಧ್ಯಮವು ಸರ್ಕಾರ, ವ್ಯವಸ್ಥೆ ಅಥವಾ ಇನ್ನೂ ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಹೊಗಳಬೇಕು. ತಪ್ಪು ಮಾಡಿದಾಗ ಕಂಡಿಸುವ ಧೈರ್ಯ ಮಾಡಬೇಕು.
- ಹಣ, ಕೀರ್ತಿಗಾಗಿ ಮಾಧ್ಯಮ ಮಾಡಬಾರದು. ಗುರಿ ಮತ್ತು ನೈತಿಕತೆಯ ಆಧಾರದಲ್ಲಿ ಮಾತ್ರ ಮಾಧ್ಯಮ ಕಟ್ಟಬೇಕು.
- ಸುದ್ದಿ ಮಾಡುವುದರ ಜೊತೆಗೆ ಸಹಾಯ ಮಾಡುವ ಮನಸ್ಥಿತಿ ಇರಬೇಕು.
- ಮಾಧ್ಯಮದಲ್ಲಿ ಶುದ್ದ ಹಸ್ತದವರು ಇರಬೇಕು. ಭ್ರಷ್ಟಚಾರ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಮಾಧ್ಯಮದಲ್ಲಿ ಇರಬಾರದು.
ಇಂತಹ ಹಲವಾರು ಮಾಧ್ಯಮ ನೈತಿಕತೆಯನ್ನು ಬಳಸಿಕೊಂಡು ನಾನು ಯಾವುದಕ್ಕಾಗಿ ಮಾಧ್ಯಮಕ್ಕೆ ಬಂದಿದ್ದೇನೆ, ಭವಿಷ್ಯದಲ್ಲಿ ನನ್ನಿಂದ ಏನು ಬದಲಾಗಬೇಕು? ಸಮಾಜ ಮತ್ತು ದೇಶಕ್ಕಾಗಿ ನಾನು ಏನು ಮಾಡಬಹುದು? ಎಂಬ ವಿಚಾರಗಳನ್ನು ಮಾಡುತ್ತಾ ಮಾಧ್ಯಮದಲ್ಲಿ ಸೇರಬೇಕು. ಮಾಧ್ಯಮದ ಧರ್ಮ ಪಾಲನೆಯು ಅತ್ಯಂತ ಶ್ರೇಷ್ಠವಾಗಿದ್ದು ಮಾಧ್ಯಮದ ಧರ್ಮವನ್ನು ತಾಯಿಗೆ ಹೋಲಿಸಬಹುದು. ತಾಯಿಯ ಶ್ರೇಷ್ಠತೆಯಂತೆ ಪತ್ರಿಕಾ ಧರ್ಮವನ್ನು ಪಾಲಿಸಬೇಕು.