ಮಾಧ್ಯಮ ಕ್ಷೇತ್ರವು ಶೇ. 90% ಕ್ಕಿಂತಲೂ ಅಧಿಕ ಖಾಸಗಿ ವಲಯದಲ್ಲಿದ್ದು ಇಂದು ಮಾಧ್ಯಮವೂ ಕೂಡ ವ್ಯಾಪಾರೀಕರಣದ ಉದ್ದೇಶಗಳನ್ನು ಹೊಂದಿದೆ. ಒಂದು ದೇಶದ ಮಾಧ್ಯಮವು ಆ ದೇಶದ ಬೆಳವಣಿಗೆಗೆ ಪೂರಕವಾಗಬೇಕಾದರೆ ಮಾಧ್ಯಮ ಕ್ಷೇತ್ರಕ್ಕೆ ಸಂಪೂರ್ಣ ಬೆಂಬಲವಿರಬೇಕು. ಬೆಂಬಲ ಅಂದರೆ ಸರಕಾರದ ನೆರವು ಮತ್ತು ಸರಕಾರದಿಂದ ಭದ್ರತೆ ಹಾಗೂ ಮಾಧ್ಯಮದವರ ಹಿತ ಕಾಯುವ ಕಾನೂನು ರಚನೆ ಏಕೆಂದರೆ ವಿಶ್ವದ ಪಟ್ಟಿಯಲ್ಲಿ ಭಾರತವು 46.56 ಸ್ಕೋರ್‌ನೊಂದಿಗೆ 142ನೇ ಸ್ಥಾನದಲ್ಲಿದೆ. ಭಾರತಕ್ಕಿಂತಲೂ ಹಿಂದುಳಿದ ಅದೆಷ್ಟೋ ರಾಷ್ಟ್ರ ಗಳು ಮಾಧ್ಯಮದವರಿಗೆ ಭದ್ರತೆಗಳನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ನಾರ್ವೆ, ಪಿನ್‌ಲ್ಯಾಂಡ್, ಸ್ವೀಡನ್‌ನಂತಹ ದೇಶಗಳಲ್ಲಿ ಮಾಧ್ಯಮದವರ ಮೇಲೆ ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಹಲ್ಲೆಗಳು ನಡೆಯದೇ ಸರ್ವ ಸ್ವತಂತ್ರವಾಗಿ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವಂತಹ ವಾತಾವರಣ ಸೃಷ್ಠಿಯಾಗಿದೆ. ರಷ್ಯಾ ಸೇರಿದಂತೆ ಕ್ಯೂಬಾ, ಈಜಿಫ್ಟ್, ಪಾಕಿಸ್ತಾನ, ಸ್ವೀಡನ್‌ನಂತಹ ಹಲವಾರು ದೇಶಗಳಲ್ಲಿ ಪತ್ರಕರ್ತರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ದೇಶಗಳ ಪಟ್ಟಿಯಲ್ಲಿ ಭಾರತವು ಸೇರಿದ್ದು ಅತ್ಯಂತ ಶೋಚನೀಯ ವಿಚಾರ ಭಾರತದಲ್ಲಿ ಮಾಧ್ಯಮ ನಿಂದನೆ. ಮಾಧ್ಯಮ ವಿರೋಧಿಸುವ ಸೂಚ್ಯಂಕದಲ್ಲಿ ಶೇ. 60.73% ರಷ್ಟಿದ್ದು ಇದರಿಂದ ಜಗತ್ತಿನ ಪಟ್ಟಿಯಲ್ಲಿ 142ನೆಯ ಸ್ಥಾನವನ್ನು ಪಡೆದಿದ್ದೇವೆ.
ಭಾರತದಲ್ಲಿ ಮಾಧ್ಯಮದ ಪರಿಸ್ಥಿತಿಯು ಅಷ್ಟೇನೂ ಚೆನ್ನಾಗಿಲ್ಲ. ಭಾರತವನ್ನು ಹೋಲಿಸಿಕೊಂಡರೆ ನೆರೆಯ ನೇಪಾಳ, ಶ್ರೀಲಂಕಾ, ಮಯನ್ಮಾರ ದೇಶಗಳೇ ಉತ್ತಮ. ಭಾರತದಲ್ಲಿ ಮಾಧ್ಯಮಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು UNESCO ಕಳವಳ ವ್ಯಕ್ತಪಡಿಸಿದ್ದು ಅಭಿವೃದ್ಧಿಶೀಲವಾದ ಭಾರತವು ಮಾಧ್ಯಮದವರಿಗೆ ಮುಕ್ತ ಅವಕಾಶಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿ ಅಭಿಪ್ರಾಯಪಟ್ಟಿದೆ. ಇದೇ ವಿಚಾರದಲ್ಲಿ ನರೇಂದ್ರ ಮೋದಿಯವರು ಭಾರತೀಯ ಮಾಧ್ಯಮದವರಿಗೆ ಮುಕ್ತ ಅವಕಾಶ ಮತ್ತು ಕಾನೂನು ಭದ್ರತೆಗಳನ್ನು ಒದಗಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಮಾಡುತ್ತದೆಂದು 2019ರ ವಿಶ್ವ ಪತ್ರಕರ್ತರ ದಿನಾಚರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದರು. ಆದರೂ ಕೂಡ ಅಸ್ಸಾಂ, ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳದ0ತಹ ರಾಜ್ಯಗಳಲ್ಲಿ ಮಾಧ್ಯಮದವರ ಮೇಲೆ ಹಲ್ಲೆಗಳು ಗುಂಡಾಗಿರಿ, ಕೊಲೆ ಬೆದರಿಕೆಯಂತಹ ಪ್ರಕರಣಗಳು ಪ್ರತಿದಿನವು ನಡೆಯುತ್ತಿವೆ. ಭಾರತದಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಕೊಲೆಬೆದರಿಕೆ, ಬ್ಲಾಕ್‌ಮೇಲ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಜೊತೆಗೆ ಸುಳ್ಳು ಕೇಸ್ ದಾಖಲಿಸುವುದು, ಸುಳ್ಳು ಆಪಾದನೆಗಳನ್ನು ಮಾಡುವುದು, ಮಾನನಷ್ಟ ಮೊಕದ್ದಮೆ ಮತ್ತು ಗೌಪ್ಯತಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವುದು, ಜಾತಿ ನಿಂದನೆಯ0ತಹ ಪ್ರಕರಣಗಳನ್ನು ದಾಖಲಿಸಿ ಮಾಧ್ಯಮದವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹೀಗೆ ಮಾಧ್ಯಮದವರ ಮೇಲೂ ಕೂಡ ನಿರಂತರ ಶೋಷಣೆ ನಡೆಯುತ್ತಲೇ ಬಂದಿದೆ. ಪ್ರಭಾವಿ ರಾಜಕಾರಣಿಗಳು ರಾಜಕೀಯ ಪಕ್ಷಗಳು ಮತ್ತು ಜಾತಿವಾದಿಗಳ ಕಪಿ ಮುಷ್ಠಿಯಲ್ಲಿ ಭಾರತದ ಮಾಧ್ಯಮವು ನಲುಗುತ್ತಿದೆ.
ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ನ್ಯಾಯ ಸಿಗಬೇಕಾದರೆ, ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಮತ್ತು ದೇಶದ ಅಭಿವೃದ್ಧಿಗಾಗಿ ದೇಶದ ಮಾಧ್ಯಮಗಳು ನಿರ್ಭೀತಿಯಿಂದ, ಕಾನೂನಾತ್ಮಕವಾದ ಮಾಧ್ಯಮ ಧರ್ಮ ಪಾಲನೆಯಲ್ಲಿ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಸಮಸ್ಯೆಗಳಿರುವಾಗ ಮಾಧ್ಯಮ ಕ್ಷೇತ್ರವು ಸಮಸ್ಯೆಯಿಂದ ಮುಕ್ತವಾಗಿಲ್ಲ. ಆದುದರಿಂದ ಮಾಧ್ಯಮಗಳು ಕಾನೂನಿನ ಸಹಕಾರ ತಮ್ಮ ಆಂತರಿಕ ಭದ್ರತೆಗಳನ್ನು ಹೆಚ್ಚಿಸಿಕೊಂಡು ಉತ್ತಮ ಮಾಧ್ಯಮ ಕಾರ್ಯಗಳನ್ನು ಮಾಡುತ್ತಾ ಸಮಾಜ ಮತ್ತು ದೇಶದ ಅಭ್ಯುದಯಕ್ಕೆ ಶ್ರಮಿಸಬೇಕು. ಕೆಲವು ಸಾರಿ ಸತ್ಯದ ದಾರಿಯಲ್ಲಿ ನಡೆಯುವಾಗ ಸಮಸ್ಯೆಗಳು ಬರುವುದು ಸಹಜ ಸಮಸ್ಯೆಗಳಿಗೆ ಹೆದರಿ ಓಡದೆ ಪ್ರಾಮಾಣಿಕವಾಗಿ ಮಾಧ್ಯಮವನ್ನು ಮುನ್ನಡೆಸುವ ಪ್ರಯತ್ನವನ್ನು ಪತ್ರಕರ್ತ ಸೇರಿದಂತೆ ಮಾಲೀಕರು ಮತ್ತು ತಾಂತ್ರಿಕ ವರ್ಗವು ಮಾಡಬೇಕು.

                                                                                                                                                         

 

 

 

 

ರಮೇಶ್ ಎಸ್.ಜಿ

ಪ್ರಧಾನ ಕಾರ್ಯದರ್ಶಿಗಳು

ಸಂಪಾದಕರು

ಕನಸಿನ ಭಾರತ